ಕಾಡು ಕರಿಬೇವು

ರೂಟೇಸೀ ಕುಟುಂಬದ ಮುರ್ರಾಯ ಕುಲದ ಎಗ್ಸೋಟಿಕ ಜಾತಿಯ ಸದಾ ಹಸಿರಾಗಿರುವ ಪುಷ್ಕಳ ಪೊದೆ ಅಥವಾ ಸಣ್ಣ ಮರ, ರೂಢಿಯಲ್ಲಿ ಅಂಗಾರಕನ ಗಿಡವೆಂದು ಕರೆಯುವುದೂ ಉಂಟು. ಇದು ಭಾರತ ದೇಶದ ಮೂಲವಾಸಿ. ಕಾಡು ಕರಿಬೇವನ್ನು ಸಾಮಾನ್ಯವಾಗಿ ತೋಟಗಳಲ್ಲಿ ಅದರ ಹಸಿರಾದ ಎಲೆಗಳಿಗಾಗಿಯೂ ಸುವಾಸನಾಯುಕ್ತ ಬಿಳಿ ಹೂಗಳಿಗಾಗಿಯೂ ಬೆಳೆಸುತ್ತಾರೆ. ಇದು ಅಲಂಕಾರದ ಬೇಲಿ ಸಸ್ಯವಾಗಿಯೂ ಪ್ರಖ್ಯಾತಿ ಪಡೆದಿದೆ. ವಿವಿಧ ಆಕರ್ಷಿಕ ಆಕಾರಗಳಲ್ಲಿ ಇದನ್ನು ಕತ್ತರಿಸಬಹುದು. ಇದರ ಎಲೆಗಳನ್ನು ಫಿಲಿಪೈನ್ ದೇಶದಲ್ಲಿ ಭೇದಿಗೂ ಎಲೆಯ ಪುಡಿಯನ್ನು ಕತ್ತರಿಸಿದ ಗಾಯಗಳಿಗೂ ಎಳೆದ ಕಾಂಡದ ಕಡ್ಡಿಯನ್ನು ಹಲ್ಲುಜ್ಜಲೂ ಉಪಯೋಗಿಸುತ್ತಾರೆ. ಇದರ ಮರದಿಂದ ಕುಶಲ ಕೈಗಾರಿಕಾ ವಸ್ತುಗಳನ್ನೂ ಬೆತ್ತ ಸಣ್ಣಪೆಟ್ಟಿಗೆ ಮತ್ತು ಗಣಿತಶಾಸ್ತ್ರದ ಉಪಕರಣಗಳನ್ನೂ ಮಾಡುತ್ತಾರೆ. ಕಾಡು ಕರಿಬೇವನ್ನು 1,500 ಮೀಟರ್ ಎತ್ತರದ ವರೆಗಿನ ಪ್ರದೇಶಗಳಲ್ಲೂ ಬೇಸಾಯ ಮಾಡಬಹುದು.

 ಕಾಡು ಕರಿಬೇವಿನ ಎಲೆಗಳಿಗೆ ಹೊಳಪಿದೆ. ಅಂಚು ನಯವಾಗಿದೆ. ಎಳೆಯ ಎಲೆಗಳ ಮೇಲೆ ಮೃದು ಕೂದಲುಗಳಿರುತ್ತವೆ. ಎಲೆಗಳು ಬೆಸ. ಕಿರು ಎಲೆಗಳು 3-9, ಕರನೆಯಾಕಾರ ಅಥವಾ ವಜ್ರಾಕೃತಿ, 1"-2" ಉದ್ದ, ಮೊಂಡು ತುದಿ, ಕೆಲವು ಸಮಯ ತುದಿ ಕತ್ತರಿಸಿದಂತಿರುತ್ತವೆ. ಅಂಚು ನಯ ಅಥವಾ ಸೂಕ್ಷ್ಮದಂತಾಕೃತಿ. ಹೂ ಮಂಜರಿ ಮಧ್ಯಾರಂಭಿ. ಹೂ ಗಂಟೆಯಾಕಾರ, 3/4 ಅಥವಾ ಅದಕ್ಕಿಂತಲೂ ಸ್ವಲ್ಪ ಕಡಿಮೆ ಉದ್ದ. ಹೂ ದಳಗಳು ಚೂಪಾಗಿರುತ್ತವೆ. ಹಣ್ಣು ಮೊಟ್ಟೆಯಾಕಾರ ಅಥವಾ ಆಯತಾಕಾರ, 1/3"-1/2" ಉದ್ದ, ಚೂಪು ತುದಿ, ಪಕ್ವವಾದ ಮೇಲೆ ಕೆಂಪಗಿರುತ್ತದೆ. ಒಂದು ಹಣ್ಣಿನಲ್ಲಿ ಒಂದರಿಂದ ಎರಡು ಬೀಜಗಳಿರುತ್ತವೆ. ಕಾಡು ಕರಿಬೇವನ್ನು ಬೀಜಗಳಿಂದಲೂ ಕಾಂಡದ ತುಂಡುಗಳಿಂದಲೂ ಗೂಟ ಕಟ್ಟುವುದರಿಂದಲೂ ವೃದ್ಧಿ ಮಾಡಬಹುದು.

   

 (ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ